ಗ್ಲ್ಯಾಡ್‍ಸ್ಟನ್, ವಿಲಿಯಂ ಇವಾರ್ಟ್ -
1809 - 1898. ಹತ್ತೊಂಭತ್ತನೆಯ ಶತಮಾನದ ಅತ್ಯಂತ ಪ್ರಸಿದ್ಧ ಬ್ರಿಷಿಷ್ ರಾಜ್ಯತಂತ್ರಜ್ಞ, ವಾಗ್ಮಿ, ಗ್ರಂಥಕರ್ತ. ಈತ ಸುಮಾರು ನಲವತ್ತು ವರ್ಷಗಳ ಕಾಲ ತನ್ನ ದೇಶದ ರಾಜಕೀಯ ಕ್ಷೇತ್ರದಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರಮುಖನಾಗಿದ್ದ. ದೇಶದ ಹಣಕಾಸಿನ ವ್ಯವಹಾರಗಳಲ್ಲಿ ಈತ ಅತಿ ಚತುರನಾಗಿದ್ದ. ನಾಲ್ಕು ಸಾರಿ ಇಂಗ್ಲೆಂಡಿನ ಪ್ರಧಾನಿಯಾಗಿದ್ದ. ಲಿವರ್ಪೂಲಿನಲ್ಲಿ 1809 ರ ಡಿಸೆಂಬರ್ 29 ರಂದು ಜನಿಸಿದ ಈತ ಸ್ಕಾಟಿಷ್ ವಂಶಸ್ಥ. ತಂದೆ ಜಾನ್ ಗ್ಲ್ಯಾಡ್‍ಸ್ಟನ್ ಲಿವರ್ಪೂಲಿನ ಶ್ರೀಮಂತ ವರ್ತಕ. ಮಗ ಗ್ಲ್ಯಾಡ್‍ಸ್ಟನ್ ಈಟನ್ ಮತ್ತು ಆಕ್ಸ್‍ಫರ್ಡಿನ ಕ್ರೈಸ್ಟ್ ಚರ್ಚಿನಲ್ಲಿ ವಿದ್ಯಾಭ್ಯಾಸ ಪಡೆದ. ಈತ ಆಕ್ಸ್‍ಫರ್ಡ್ ಯೂನಿಯನ್ನಿನ ಅಧ್ಯಕ್ಷನಾಗಿ ಚುನಾಯಿತನಾಗಿದ್ದ.

ಗ್ಲ್ಯಾಡ್‍ಸ್ಟನನ ಸಾರ್ವಜನಿಕ ಜೀವನ ಚಿಕ್ಕವಯಸ್ಸಿನಲ್ಲೇ ಆರಂಭವಾಯಿತು. 1832 ರಲ್ಲಿ, 23 ನೆಯ ವಯಸ್ಸಿನಲ್ಲಿ, ನೆವಾರ್ಕ್ ಕ್ಷೇತ್ರದಿಂದ ಕಾಮನ್ಸ್ ಸಭೆಗೆ ಆರಿಸಿ ಬಂದ. 1834 ರಲ್ಲಿ ಸರ್ ರಾಬರ್ಟ್ ಪೀಲನ ಮಂತ್ರಿಮಂಡಲದಲ್ಲಿ ಖಜಾನೆ ವ್ಯವಹಾರಗಳ ಕಿರಿಯ ಸದಸ್ಯನಾಗಿ ನೇಮಿಸಲ್ಪಟ್ಟನಲ್ಲದೆ 1835 ರಲ್ಲಿ ವಸಾಹತುಗಳ ಅಧೀನ ಕಾರ್ಯದರ್ಶಿಯಾದ ಕೂಡ. 1838ರಲ್ಲಿ ದಿ ಸ್ಟೇಟ್ ಇನ್ ರಿಲೇಷನ್ಸ್ ವಿತ್ ದಿ ಚರ್ಚ್ ಎಂಬ ಒಂದು ವಿವಾದಾಸ್ಪದ ಗ್ರಂಥವನ್ನು ಪ್ರಕಟಿಸಿದ. 1841ರಲ್ಲಿ ಈತ ಬೋರ್ಡ್ ಆಫ್ ಟ್ರೇಡಿನ ಉಪಾಧ್ಯಕ್ಷನೂ 1843ರಲ್ಲಿ ಅದರ ಅಧ್ಯಕ್ಷನೂ ಆದ. 1845 ರ ಜನವರಿಯಲ್ಲಿ ಚರ್ಚ್ ನೀತಿಯ ಬಗ್ಗೆ ಭಿನ್ನಾಭಿಪ್ರಾಯಉಂಟಾಗಿ ರಾಜೀನಾಮೆ ಸಲ್ಲಿಸಿದ. ಆದರೆ ಅದೇ ವರ್ಷ ಡಿಸೆಂಬರಿನಲ್ಲಿ ಪುನಃ ಸರ್ಕಾರವನ್ನು ಸೇರಿದಾಗ ಇವನನ್ನು ವಸಾಹತು ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಪೀಲ್ ಸರ್ಕಾರದ ಪತನವಾದಾಗ ಇವನ ಅಧಿಕಾರವೂ ಹೋಯಿತು. 1847 ರಲ್ಲಿ ಗ್ಲ್ಯಾಡ್‍ಸ್ಟನ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಕಾಮನ್ಸ್ ಸಭೆಗೆ ಪುನ: ಆರಿಸಿ ಬಂದ. ಈತ 1849 ರಲ್ಲಿ ಇಟಲಿಗೆ ಭೇಟಿ ನೀಡಿ ನೇಪಲ್ಸಿನ ಸೆರೆಮನೆಗಳಲ್ಲಿದ್ದ ಪರಿಸ್ಥಿತಿಯನ್ನು ಕುರಿತ 1851ರಲ್ಲಿ ಲೇಖನಗಳನ್ನು ಪ್ರಕಟಿಸಿದ. ಈ ಲೇಖನಗಳು ಇಟಲಿಯಲ್ಲಿ ಅಲ್ಲೋಲಕಲ್ಲೋಲವನ್ನೆಬ್ಬಿಸಿದುವಲ್ಲದೆ ಅಲ್ಲಿಯ ಆಡಳಿತದಲ್ಲಿ ಬದಲಾವಣೆಗಳಾಗಲು ಸಹಾಯಕವಾದುವು.

1850ರಲ್ಲಿ ಸರ್ ರಾಬರ್ಟ್ ಪೀಲ್ ಗತಿಸಿದಗಿನಿಂದ ಗ್ಲ್ಯಾಡ್‍ಸ್ಟನನ ಪ್ರಾಮುಖ್ಯ ಹೆಚ್ಚುತ್ತ ಹೋಯಿತು. ಕಮನ್ಸ್ ಸಭೆಯಲ್ಲಿ ಈತ ಅತ್ಯುತ್ತಮ ವಾಗ್ಮಿ ಎಂದು ಹೆಸರಾದ. ಈತ ಆರ್ಥಿಕ ವ್ಯವಹಾರಗಳ ಮಂತ್ರಿಯಾಗಿ 1853ರಲ್ಲಿ ಮಂಡಿಸಿದ ಆಯವ್ಯಯ ದೇಶದ ಆರ್ಥಿಕ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸಿತು. 1868ರಲ್ಲಿ ಗ್ಲ್ಯಾಡ್‍ಸ್ಟನ್ ಮೊದಲ ಭಾರಿಗೆ ಪ್ರಧಾನಿಯಾದ. 1878ರಲ್ಲಿ ರಾಜೀನಾಮೆ ಇತ್ತ. ಅನಂತರ ಕೆಲವು ವರ್ಷಗಳ ಕಾಲ ಅಧ್ಯಯನ ಮತ್ತು ಸಾಹಿತ್ಯ ಸೇವೆಯಲ್ಲಿ ನಿರತನಾದ. 1879-80ರಲ್ಲಿಈತ ಮಾಡಿದ ಭಾಷಣಗಳ ಪರಿಣಾಮವಾಗಿ ಡಿಸ್ರೇಲಿ ಮಂತ್ರಿಮಂಡಲದ ಪತನವಾಗಿ ಗ್ಲ್ಯಾಡ್‍ಸ್ಟನ್ ಪ್ರಧಾನಿಯಾದ. ಆಗ ದೇಶ ಆಫ್ಘಾನಿಸ್ತಾನ, ದಕ್ಷಿಣ ಆಫ್ರಿಕ, ಐರ್ಲೆಂಡ್, ಈಜಿಪ್ಟ್, ಸೂಡನ್ ಮುಂತಾದ ಕಡೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಈ ಕಠಿಣ ಕಾಲದಲ್ಲಿ ತನ್ನ ನೀತಿಗಳಿಗೆ ಸಾಕಷ್ಟು ಬಹುಮತವಿಲ್ಲದ ಕಾರಣ ರಾಜೀನಾಮೆ ಇತ್ತು ಪುನಃ 1886ರಲ್ಲಿ ಮೂರನೆಯ ಬಾರಿ ಪ್ರಧಾನಮಂತ್ರಿಯಾದ. ಈ ಅವಧಿಯಲ್ಲಿ ಐರ್ಲೆಂಡಿನ ಬಗ್ಗೆ ಗ್ಲ್ಯಾಡ್‍ಸ್ಟನ್ ಮಂಡಿಸಿದ ಹೋಮ್ ರೂಲ್ ಮಸೂದೆಗೆ ತನ್ನ ಪಕ್ಷದಲ್ಲೇ ಸಾಕಷ್ಟು ಬೆಂಬಲ ದೊರೆಯದೆ ಹೋದ್ದರಿಂದ ಅದು ಬಿದ್ದುಹೋಯಿತು. ಗ್ಲ್ಯಾಡ್‍ಸ್ಟನ್ ಪುನಃ ಪ್ರಧಾನಿ ಪದವಿಯನ್ನು ತ್ಯಜಿಸಬೇಕಾಯಿತು. 1892ರಲ್ಲಿ ನಾಲ್ಕನೆಯ ಮತ್ತು ಕೊನೆಯ ಬಾರಿ ಪ್ರಧಾನಿಯಾದ. ಹೋಮ್ ರೂಲ್ ಮಸೂದೆಯನ್ನು ಕಾಮನ್ಸ್ ಸಭೆ ಒಪ್ಪಿಕೊಂಡಿತಾದರೂ ಲಾಡ್ರ್ಸ್ ಸಭೆ ಅದನ್ನು ತಿರಸ್ಕರಿಸಿತು. ಗ್ಲ್ಯಾಡ್‍ಸ್ಟನ್ ವೃದ್ಧಾಪ್ಯದ ಕಾರಣ 1894ರಲ್ಲಿ ಪ್ರಧಾನ ಮಂತ್ರಿಪದವಿಗೆ ರಾಜೀನಾಮೆ ಇತ್ತ. ಅನಂತರವೂ ಈತ ದೇಶದ ಸಮಸ್ಯೆಗಳಲ್ಲಿ ಆಸಕ್ತಿ ತೋರಿಸುತ್ತಿದ್ದುದರ ಜೊತೆಗೆ ಹೋಮರ್, ಡಾಂಟೆ ಮತ್ತು ಇತರ ಬರೆಹಗಾರರ ವಿಷಯವಾಗಿ ಬರೆದ. ಗ್ಲ್ಯಾಡ್‍ಸ್ಟನ್ ಆದರ್ಶವಾದ ಮತ್ತು ವಯವಾಹರ ಚತುರತೆಯ ಸಂಗಮವಾಗಿದ್ದ. ಹಲವು ಚಳವಳಿಗಳ ಪುರಸ್ಕರ್ತನಾಗಿ ಪ್ರಗತಿಪರ ವೈಚಾರಿಕನೆಂಬ ಹೆಸರು ಪಡೆದಿದ್ದ. ಲಾರ್ಡ್ ಸ್ಯಾಲಿಸ್‍ಬರಿ ಇವನನ್ನು ಒಬ್ಬ ಶ್ರೇಷ್ಠ ಕ್ರೈಸ್ತಧರ್ಮಿ ಎಂದು ವರ್ಣಿಸಿದ್ದಾರೆ. ಸಂಪ್ರದಾಯವಾದಿ ಟೋರಿಯಾಗಿ ರಾಜಕೀಯ ಜೀವನವನ್ನಾರಂಭಿಸಿದ ಗ್ಲ್ಯಾಡ್‍ಸ್ಟನ್ ಕ್ರಮಕ್ರಮವಾಗಿ ಉದಾರವಾದಿಯಾಗಿ ಕೀರ್ತಿ ಗಳಿಸಿದ. 1898ರ ಮೇ 19ರಂದು ಗ್ಲ್ಯಾಡ್‍ಸ್ಟನ್ ಕ್ರಮಕ್ರಮವಾಗಿ ಉದಾರವಾದಿಯಾಗಿ ಕೀರ್ತಿ ಗಳಿಸಿದ. 1898ರ ಮೇ 19ರಂದು ಗ್ಲ್ಯಾಡ್‍ಸ್ಟನ್ ಗತಿಸಿದ.
(ಎ.ಎಂ.ಆರ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ